ಕನ್ಫ್ಯೂಷಿಯಸ್ : ಪ್ರ.ಶ.ಪು. 551-479. ಚೀನ ದೇಶದ ಪ್ರಸಿದ್ಧ ತತ್ತ್ವ್ವಜ್ಞಾನಿ. ರಾಜಕೀಯ ಮತ್ತು ನಿತ್ಯಜೀವನದ ಆಚಾರ ವ್ಯವಹಾರಗಳಲ್ಲಿ ಉನ್ನತಮಟ್ಟ ಸಾಧಿಸಿದ ಮಹಾಪುರುಷ. ಈತ ಬೋಧಿಸಿದ ಸಾರ್ವಜನಿಕ, ರಾಜಕೀಯ ನೀತಿಬೋಧೆಯ ಆಧಾರದ ಮೇಲೆ ಮುಂದೆ ಕನ್ಫ್ಯೂಷಿಯನಿಸಂ ಎಂಬ ಪಂಥವೊಂದು ತಲೆಯೆತ್ತಿ ಪ್ರಸಿದ್ಧವಾಯಿತು. ಕೂಂಗ್ ಫೂ ಟ್ಸು (ಕಾಂಗ್ ಕ್ಯೂ) ಎಂಬುದು ಇವನ ಹೆಸರಿನ ಚೀನೀ ರೂಪ. ಪ್ರ.ಶ.ಪು. 551ರಲ್ಲಿ ಷಾಂಟುಂಗ್ ಪ್ರಾಂತ್ಯದ ಲು ಎಂಬಲ್ಲಿ ಜನ್ಮವೆತ್ತಿದ. ಇವನು ಷಾಂಗ್ ರಾಜ ವಂಶಕ್ಕೆ  ಸೇರಿದವನಾದರೂ ಬಡತನ ದಲ್ಲಿ ಬೆಳೆದ. ಈತ ಹುಟ್ಟಿದಾಗ 70 ವರ್ಷಗಳ ವೃದ್ಧ ತಂದೆ ಸೈನ್ಯದಲ್ಲಿ ಸಣ್ಣ ಅಧಿಕಾರಿಯಾಗಿದ್ದ. ಮೂರು ವರ್ಷಗಳ ಅನಂತರ ತಂದೆ ಮೃತನಾಗಲು ತಾಯಿ ಬಹು ಕಾರ್ಪಣ್ಯದಿಂದ ಈತನನ್ನು ಸಾಕಿದಳು. ಒಳ್ಳೆ ಶಿಕ್ಷಣ ದೊರಕಿ 17 ನೆಯ ವಯಸ್ಸಿನಲ್ಲೇ ಇವನಿಗೆ ಸರ್ಕಾರಿ ನೌಕರಿಯೂ ಸಿಕ್ಕಿತು. 18ನೆಯ ವಯಸ್ಸಿನಲ್ಲಿ ವಿವಾಹ ನಡೆದು ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ತರುವಾಯ ಉಪಾಧ್ಯಾಯವೃತ್ತಿಗೆ ಕೈಹಾಕಿದ. ಪ್ರ.ಶ.ಪು. 517ರಲ್ಲಿ ರಾಜಧಾನಿಗೆ ಹೋದಾಗ ಟಾಓಯಿಸಂ ಪಂಥದ ಸ್ಥಾಪನಾಚಾರ್ಯ ಲಾವೊತ್ಸೆಯೊಡನೆ ಭೇಟಿ ಯಾಯಿತು. ಇಬ್ಬರಲ್ಲಿ ನಿಕಟ ಪರಿಚಯ ಬೆಳೆಯಿತು. ಕೆಲಕಾಲ ತನ್ನ ಹಿಂಬಾಲಕರೊಂದಿಗೆ ತನ್ನ ತತ್ತ್ವ ಪ್ರಚಾರಕಾರ್ಯದಲ್ಲಿ ತೊಡಗಿದ್ದ. 52ನೆಯ ವಯಸ್ಸಿನಲ್ಲಿ ಚುಂಗ್ಟೂವಿನ ನ್ಯಾಯಮೂರ್ತಿಯಾಗಿ ನೇಮಕಗೊಂಡ. ಈ ಕ್ಷೇತ್ರದಲ್ಲಿ ಉತ್ಸಾಹದಿಂದಲೂ ಶ್ರದ್ಧೆಯಿಂದಲೂ ದುಡಿದು ಪರಿಣಾಮಕಾರಿಯಾದ ಸುಧಾರಣೆಗಳನ್ನು ಜಾರಿಗೆ ತಂದ. ಕ್ರಮೇಣ ಮಂತ್ರಿ ಪದವಿಗೂ ಏರಿದ. ಇಬ್ಬರು ಬುದ್ಧಿವಂತರಾದ ಶಿಷ್ಯರ ಸಹಾಯದಿಂದ ಪ್ರಾಂತವನ್ನು ಸಂಪತ್ಸಮೃದ್ಧಿಗಳೆಡೆಗೆ ಕೊಂಡೊಯ್ದ. ಆ ವೇಳೆಗೆ ಇವನ ಆಶ್ರಯದಾತನಾದ ಪ್ರಾಂತ್ಯಾಧಿಕಾರಿ ಮೃತನಾಗಿ, ತರುವಾಯ ಬಂದ ಪ್ರಮುಖಾಧಿಕಾರಿ ದುರ್ನೀತಿಗೆ ಇಳಿದದ್ದು ಇವನಿಗೆ ಸರಿ ಎನಿಸಲಿಲ್ಲ. ತನ್ನ ತತ್ತ್ವಗಳನ್ನು ಪಾಲಿಸುವ ಅಧಿಕಾರಿ ಬೇರೆಲ್ಲಿಯಾದರೂ ಸಿಕ್ಕಬಹುದೆಂಬ ಆಶೆಯಿಂದ 13 ವರ್ಷಕಾಲ ಅನೇಕ ಕಡೆ ಅಲೆದಾಡಿದ. ಅಂಥವರಾರೂ ಸಿಗದಾಗ ನಿರಾಶನಾಗಿ ಪುನಃ ಲು ಪ್ರಾಂತ್ಯಕ್ಕೆ ಹಿಂತಿರುಗಿದ (ಪ್ರ.ಶ.ಪು. 483). ಆದರೆ ಅಧಿಕಾರವನ್ನು ಮಾತ್ರ ಸ್ವೀಕರಿಸಲಿಲ್ಲ. ಅನಂತರದ 5 ವರ್ಷಗಳನ್ನು ವಿಶ್ರಾಂತಿಯಲ್ಲಿ ಕಳೆದು ತನ್ನ 72ನೆಯ ವಯಸ್ಸಿನಲ್ಲಿ ನಿಧನ ಹೊಂದಿದ. ಮರಣಸಮಯದಲ್ಲಿ ಇವನ ತತ್ತ್ವಗಳಿಂದ ಆಕರ್ಷಿತರಾಗಿದ್ದ ಯುವಕರ ತಂಡವೊಂದು ಇವನ ಸುತ್ತ ಸೇರಿದ್ದು, ಈತನ ತತ್ತ್ವಗಳ ಪ್ರಚಾರಕ್ಕೆ ಸಿದ್ಧರಾಗಿದ್ದರು. ಗುರುವಿನ ಪ್ರಭಾವದಿಂದ ಆ ಶಿಷ್ಯರು ಸರ್ಕಾರದ ಉನ್ನತ ಪದವಿಗಳನ್ನು ದೊರಕಿಸಿಕೊಂಡರಾದರೂ ಯಾರೂ ಬಹುಕಾಲ ಸಾಕಷ್ಟು ತತ್ತ್ವನಿಷ್ಠರಾಗಿ ಉಳಿಯಲಿಲ್ಲ.

ಇವನ ಗುಣಗಳು ಅಪಾರ. ಸಾಧುಸ್ವಭಾವ, ಗೌರವ ವರ್ತನೆಗಳಿಗೆ ಇವನು ಹೆಸರಾಗಿದ್ದ. ನಿಸ್ಸ್ವಾರ್ಥ, ಪ್ರಾಮಾಣಿಕ ಹಾಗೂ ಶೀಲವಂತ ವ್ಯಕ್ತಿ. ಈ ಗುಣಗಳಿಂದ ಅಂದಿನ ಸಮಾಜ ಜೀವನದಲ್ಲಿ ಗಣ್ಯಸ್ಥಾನಗಳಿಸಿದರೂ ತಾನೊಬ್ಬ ಸುಧಾರಕನೇ ವಿನಾ ಪ್ರವಾದಿಯಲ್ಲ ಎಂದು ಹೇಳಿಕೊಂಡುದು ಈತನ ಘನತೆಗೊಂದು ನಿದರ್ಶನ. ಚೀನದ ಜನತೆಗೆ ವ್ಯಾವಹಾರಿಕ ಸಾಮಾಜಿಕ ಜೀವನದಲ್ಲಿ ಸಾತ್ತ್ವಿಕ ಹಾಗೂ ಸರಳಮಾರ್ಗದ ತತ್ತ್ವಗಳನ್ನು ಬೋಧಿಸಿದವರಲ್ಲಿ ಇವನು ಮೊದಲಿಗ. ಉಪದೇಶವನ್ನು ಮನೋಜ್ಞವಾಗಿ ಮಾಡಲು ಈತ ಇತಿಹಾಸ ಕಾವ್ಯ ಮತ್ತು ಸಂಗೀತ ಮಾಧ್ಯಮಗಳನ್ನು ಬಳಸಿಕೊಂಡು ಮೊದಲು ತಾತ್ತ್ವಿಕವಾಗಿಯೂ ತರುವಾಯ ಪ್ರಯೋಗಾತ್ಮಕವಾಗಿಯೂ ಬೋಧಿಸುತ್ತಿದ್ದ; ಔದ್ಧತ್ಯದಿಂದ ಅಥವಾ ಅಧಿಕಾರಪುರ್ವಕವಾಗಿ ಒತ್ತಾಯಿಸದೇ ಸ್ವಂತ ಆಚರಣೆಯಿಂದ ಶಿಷ್ಯರಿಗೆ ಮಾದರಿಯಾಗಿರು ತ್ತಿದ್ದುದೇ ಈತನ ವೈಶಿಷ್ಟ್ಯ. ಅಂಧಾನುಕರಣೆ ಮಾಡದೆ ಸ್ವತಃ ಯೋಚಿಸಿ ತಮ್ಮ ಕಾರ್ಯಗಳ ರೀತಿಯನ್ನು ನಿರ್ಧರಿಸಲು ಶಿಷ್ಯವರ್ಗಕ್ಕೆ ಉತ್ತೇಜನ ನೀಡುತ್ತಿದ್ದ. ತನ್ನ ಶಿಷ್ಯರನ್ನು ಆರಿಸುವುದರಲ್ಲೂ ಸಮತಾಭಾವ ತೋರಿ ಬಡವ ಬಲ್ಲಿದರೆಂಬ ಭೇದಗಳಿಗೆ ಅವಕಾಶ ನೀಡದೆ ಅವರ ಸಚ್ಚಾರಿತ್ರ್ಯ ಮತ್ತು ಬೌದ್ಧಿಕ ಸಾಮಥರ್ಯ್‌ಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದ. ಇವನನ್ನು ಬೋಧಕನೆನ್ನುವುದಕ್ಕಿಂತಲೂ ಸುಧಾರಕನೆನ್ನುವುದು ಹೆಚ್ಚು ಉಚಿತ. ವಿದ್ವಾಂಸನೆಂಬುದು ನಿಜವಾದರೂ ಈತನ ಕೃತಿಗಳೆಂದು ಹೇಳಬಹುದಾದ ಗ್ರಂಥಗಳಾವುವೂ ಕಾಣಬರುವುದಿಲ್ಲ.

ಇವನ ಜೀವಿತಕಾಲ ಚೀನದ ಇತಿಹಾಸದಲ್ಲಿ ಸ್ವಾರಸ್ಯವಾದುದು. ಚೌವಂಶ ಇಳಿಗತಿ ಯಲ್ಲಿತ್ತು. ದೇಶದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ತುಂಬಾ ಏರುಪೇರು ಗಳಾಗಿದ್ದುವು. ಅಧಿಕಾರಕ್ಕಾಗಿ ಪ್ರಾಂತಗಳಲ್ಲಿ ತಿಕ್ಕಾಟಗಳಿದ್ದವು. ಜನರು ರಾಜಪ್ರಭುತ್ವವನ್ನೇ ಬಂiÀÄಸುತ್ತಿದ್ದರೂ ದೇಶ ಒಗ್ಗಟ್ಟಿನಿಂದಲೂ ಶಿಸ್ತುಸಂಯಮದಿಂದಲೂ ಬಾಳ್ವೆ ನಡೆಸ ಬೇಕೆಂಬುದನ್ನು ಮನಗಂಡಿದ್ದರು. ಇದಕ್ಕಾಗಿ ನಿರ್ದಿಷ್ಟವಾದ ಧ್ಯೇಯಧೋರಣೆಗಳನ್ನು ಪ್ರತಿಪಾದಿಸಬಲ್ಲ ಒಬ್ಬ ಮೇಧಾವಿ, ಸುಧಾರಕ ಅತ್ಯಗತ್ಯ ಎಂದು ತಿಳಿದಿದ್ದರು. ಆ ಕಾಲದಲ್ಲಿದ್ದ ಪ್ರಭಾವಿ ವ್ಯಕ್ತಿಗಳೂ ಕೂಡ ರಾಜಕೀಯದ ಕಟ್ಟುಪಾಡಿಗಿಂತ ನೈತಿಕ ಧ್ಯೇಯಗಳೇ ಶ್ರೇಷ್ಠವಾದುವು. ಎಂದು ಅವುಗಳ ಆಚರಣೆಗಾಗಿ ತವಕಗೊಂಡಿದ್ದರು. ಇಂಥ ಸಮಯದಲ್ಲೇ ಇವನು ತನ್ನ ನೀತಿಪ್ರಧಾನ ಮಾರ್ಗವನ್ನು ಪ್ರಚಾರ ಮಾಡಲಾರಂಭಿಸಿದ್ದು. ಇವನು ಗೌತಮ ಬುದ್ಧನ ಸಮಕಾಲೀನ. ಪ್ರ.ಶ.ಪು. 5-4ನೆಯ ಶತಮಾನಗಳಲ್ಲಿದ್ದ ಗ್ರೀಕ್ ತತ್ತ್ವವೇತ್ತರ ವಿಚಾರಗಳಿಗೆ ಇವನ ತತ್ತ್ವಗಳು ಸರಿಹೋಲುತ್ತವೆ.

ಈತನ ತತ್ತ್ವಗಳು ಮತೀಯವಲ್ಲ; ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿಯಮಗಳವು; ತನ್ಮೂಲಕ ಸಮಾಜ ಮತ್ತು ರಾಜ್ಯದ ಉದ್ಧಾರಕ್ಕೆ ಸಾಧಕವೆನಿಸತಕ್ಕವು. ಸ್ವಂತ ಮತ್ತು ಸಾಮೂಹಿಕ ಸಂಬಂಧಗಳಲ್ಲಿ ವ್ಯಕ್ತಿ ಯಾವ ರೀತಿ ವರ್ತಿಸಬೇಕು ಎಂಬುದೇ ಆ ತತ್ತ್ವಗಳ ಸಾರಾಂಶ. ಇವನ ಮತ ಹೀಗಿದೆ: ವಿಶ್ವದಲ್ಲಿ ನಿರೂಪಕ ಶಕ್ತಿಯುಳ್ಳದ್ದು ಸ್ವರ್ಗವೊಂದೇ. ಸಂಸಾರದಲ್ಲಿ ತಂದೆಗೆ ಆ ಅಧಿಕಾರವುಂಟು. ರಾಜ್ಯದಲ್ಲಿ ರಾಜನ ಸ್ಥಾನಮಾನ ವಿಶ್ವದಲ್ಲಿನ ಸ್ವರ್ಗದಂತೆ, ಸಂಸಾರದಲ್ಲಿನ ತಂದೆಯಂತೆ; ಅವನೇ ರಾಜ್ಯದ ನಿರೂಪಕ ಶಕ್ತಿ. ಸಂಸಾರದ ಮುಖ್ಯಸ್ಥನಿಗೆ ವಿಧೇಯನಾಗಿರುವುದು, ಅನೂಚಾನವಾಗಿ ಬಂದ ಪುಜ್ಯತೆ ತೋರುವುದು-ಇವೆರಡೂ ಸಂಸಾರ ಮತ್ತು ರಾಜಕೀಯ ಜೀವನಕ್ಕೆ ಅಸ್ತಿಭಾರವಿದ್ದಂತೆ. ಇದರಂತೆ ಜನ ನಡೆದುಕೊಂಡರೆ ಸೌಹಾರ್ದ ಏರ್ಪಡುತ್ತದೆ. ಜನತೆಯ ಅತಿಶಯವಾದ ಸುಖಕ್ಕೆ ಶ್ರಮಿಸಿ ಮಾನವಸ್ವಭಾವಕ್ಕನುಗುಣವಾದ ರೀತಿಯಲ್ಲಿ ಮತ್ತು ಕಾಲದೇಶದ ಸ್ಥಿತಿಗತಿಗ ನುಸಾರವಾಗಿ ರೀತಿನೀತಿಗಳನ್ನು ರೂಪಿಸುವುದು ಆದರ್ಶ ಆಡಳಿತದ ಗುರಿ. ಅದಕ್ಕಾಗಿ ಶ್ರಮಿಸಿದ ಮಾನವ ಪ್ರೀತಿಯೇ ಸದ್ಗುಣ. ಮಾನವ ಪ್ರಕೃತಿಯನ್ನು ತಿಳಿಯುವುದೇ ಬುದ್ಧಿವಂತಿಕೆ. ಇಡೀ ಮಾನವಕುಲ ಒಂದು ಸಂಸಾರ. ತನ್ನ ಪ್ರಗತಿಯನ್ನು, ಸ್ಥಾನಮಾನಗಳನ್ನು ಅಪೇಕ್ಷಿಸುವವ ಇತರರ ಪ್ರಗತಿ, ಸ್ಥಾನಮಾನಗಳ ಸಾಧನೆಗೆ ಶ್ರಮಿಸುವುದೇ ಒಳ್ಳೆಯ ಮಾರ್ಗ. ಆದುದರಿಂದ ಪ್ರಭುತ್ವ ಜನತೆಯ ಸಹಕಾರೀ ಸಂಸ್ಥೆಯಾಗಿರಬೇಕು. ಜನತೆಯ ಸುಖಸಂಪತ್ತುಗಳ ಸಾಧನೆ ಮಾಡಬಲ್ಲವರೇ ಆಡಳಿತದಲ್ಲಿರಲು ಅರ್ಹರು. ಆದುದರಿಂದ ಆನುವಂಶಿಕ ರಾಜರು ಅರ್ಹರೂ ಸನ್ಮಾರ್ಗಿಗಳು ಆದ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಆಡಳಿತವನ್ನು ವಹಿಸುವುದೊಳ್ಳೆಯದು.

ಈ ತತ್ತ್ವಗಳಿಗೂ ಅನಂತರ ಕಾಲದಲ್ಲಿ ಇವನ ತತ್ತ್ವದ ಆಚರಣೆಗಳಿಗೂ ಹಲವಾರು ಪ್ರಮುಖ ವ್ಯತ್ಯಾಸಗಳು ಕಂಡುಬರುತ್ತವೆ. ಮಹಾಪುರುಷರ ಬೋಧನೆಗಳು ಕಾಲಕ್ರಮೇಣದಲ್ಲಿ ವಿಕೃತಗೊಳ್ಳುವುದು ಸಾಮಾನ್ಯ. ಆದರೂ ಅನಂತರದ ಕಾಲದಲ್ಲಿ-ಉದಾ: ಹ್ಯಾನ್ ವಂಶದ ಕಾಲ ಪ್ರ.ಶ.ಪು. 202 ರಿಂದ ಪ್ರ.ಶ. 221ರವರೆಗೆ ಈತನ ಅನೇಕ ಬೋಧನೆಗಳು ಕಾರ್ಯಗತವಾದುವು. ಸಮಾಜದ ಕೆಳವರ್ಗದಲ್ಲಿ ಹುಟ್ಟಿದವರು ಸಹ ತಮ್ಮ ಸದ್ಗುಣ ದಕ್ಷತೆಗಳಿಂದ ಮಂತ್ರಿಗಳಾಗಬಹುದಿತ್ತು. ದೇಶದ ಆಗುಹೋಗುಗಳನ್ನು ನಿರ್ಧರಿಸುವ ಅಧಿಕಾರ ಅವರವರೆಗೂ ಬರುತ್ತಿತ್ತು. ಒಂದಲ್ಲ ಒಂದು ವಿಧದಲ್ಲಿ ಈತನ ತತ್ತ್ವಗಳು ಚೀನ ಮಾತ್ರವಲ್ಲದೆ ಇಡೀ ಆಗ್ನೇಯ ಏಷ್ಯದ ಸಂಸ್ಕೃತಿ, ಇತಿಹಾಸಗಳ ಮೇಲೆ ಪ್ರಭಾವ ಬೀರಿವೆ.	(ಕೆ.ಜೆ.;ಎಂ.ವೈ.;ಎಸ್.ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ